ಹ್ಯಾಜ್‍ಲಿಟ್, ವಿಲಿಯಂ
	1778-1830. ಇಂಗ್ಲಿಷ್ ಸಾಹಿತ್ಯದ ಪ್ರಬಂಧಕಾರ ಮತ್ತು ವಿಮರ್ಶಕ. ಇಂಗ್ಲೆಂಡಿನ ಆಗ್ನೇಯ ಭಾಗದ ಮೇಡ್‍ಸ್ಟನ್ ಎಂಬಲ್ಲಿ 1778ರಲ್ಲಿ ಜನಿಸಿದ. ಬಾಲ್ಯಜೀವನವನ್ನು ಒಂದು ಸಣ್ಣಹಳ್ಳಿಯಲ್ಲಿ ಕಳೆದ ಈತ ಸ್ವಲ್ಪಕಾಲ ವರ್ಣಚಿತ್ರವನ್ನು ಅಭ್ಯಾಸಮಾಡಿ ಕಡೆಗೆ ಸಾಹಿತ್ಯದಲ್ಲಿ ತನ್ನ ಆಸಕ್ತಿಯನ್ನು ಗುರುತಿಸಿಕೊಂಡ. ಕ್ರಮಬದ್ಧವಾದ ಶಿಕ್ಷಣವಿಲ್ಲದಿದ್ದರೂ ಸ್ವಂತ ವ್ಯಾಸಂಗದಿಂದ ಹಿರಿಯ ಸಾಹಿತ್ಯದ ಜೀವಾಳವನ್ನರಿತಿದ್ದ. ಸ್ವಪ್ರತಿಭೆ ಮತ್ತು ಪರಿಶ್ರಮಗಳಿಂದ ಕೇವಲ ಇಪ್ಪತ್ತೈದು ವರ್ಷಗಳ ಅವಧಿಯಲ್ಲಿ ಭಾಷಣಕಾರನಾಗಿ, ಪ್ರಬಂಧಕಾರನಾಗಿ, ವಿಮರ್ಶಕನಾಗಿ ಪ್ರಥಮಪಂಕ್ತಿಗೆ ಸೇರಿದ.

	1812ರಲ್ಲಿ ಎಡಿನ್ ಬರೊ ರಿವ್ಯೂ ಮೊದಲಾದ ಪತ್ರಿಕೆಗಳಿಗೆ ಲೇಖನಗಳನ್ನು ಬರೆಯಲು ಆರಂಭಿಸಿದ. ತನ್ನ ಸಮಕಾಲೀನ ಕವಿಗಳು, ನಾಟಕಕಾರರು, ಪ್ರಬಂಧಕಾರರು ಹಾಗೂ ಕಾದಂಬರಿಕಾರರನ್ನು ಕುರಿತು ಪ್ರಬಂಧಗಳನ್ನು ರಚಿಸಿದ. ಮೈ ಫಸ್ಟ್ ಅಕ್ವೆಂಟೆನ್ಸ್ ವಿತ್ ಪೊಯೇಟ್ಸ್ ಎಂಬ ಕೋಲ್‍ರಿಜ್‍ನನ್ನು ಕುರಿತ ಇವನ ಪ್ರಬಂಧ ಇಂಗ್ಲಿಷ್ ಭಾಷೆಯ ಅತ್ಯುತ್ತಮ ಪ್ರಬಂಧವೆನಿಸಿದೆ. ಕ್ಯಾರೆಕ್ಟರ್ಸ್ ಆ¥sóï ಷೇಕ್‍ಸ್ಪಿಯರ್ಸ್ ಪ್ಲೇಸ್ (1817), ಇಂಗ್ಲಿಷ್ ಪೊಯೆಟ್ಸ್(1818-19), ಇಂಗ್ಲಿಷ್ ಕಾಮಿಕ್ ರೈಟರ್ಸ್ (1819), ಎ ವ್ಯೂ ಆ¥sóï ದ ಇಂಗ್ಲಿಷ್ ಸ್ಟೇಜ್(1818-21) ಮೊದಲಾದ ಹಲವಾರು ಪ್ರಬಂಧಗಳು ಈತನ ವಿಮರ್ಶಕ ಪ್ರಜ್ಞೆಗೆ ಸಾಕ್ಷಿಯಾಗಿವೆ.

	1819ರಲ್ಲಿ ಇವನು ಬರೆದ ಪೊಲಿಟಿಕಲ್ ಎಸ್ಸೇಸ್ ಎಂಬ ಕೃತಿ ಬಡವರ ಬಗೆಗೆ ಇವನಿಗಿದ್ದ ಕಳಕಳಿಯನ್ನು ತಿಳಿಸುತ್ತದೆ. ಇವನ ಸಮಕಾಲೀನ ಹಾಗೂ ಹಿಂದಿನ 50 ವರ್ಷಗಳಲ್ಲಿ ಮುಖ್ಯರೆಂದು ಕಂಡುಬಂದ ವ್ಯಕ್ತಿಗಳ ಚಿತ್ರಣಗಳು ದ ಸ್ಪಿರಿಟ್ ಆಫ್ ದ ಏಜ್ ಎಂಬ ಕೃತಿಯಲ್ಲಿ ಮೂಡಿಬಂದಿವೆ. ನೆಪೋಲಿಯನ್‍ನ ಬದುಕು ಇವನಿಗೆ ಬಹಳ ಇಷ್ಟವಾಗಿದ್ದ ಕಾರಣ ಲೈ¥sóï ಆಫ್ ನೆಪೋಲಿಯನ್ ಎಂಬ ಗ್ರಂಥವನ್ನು 4 ಸಂಪುಟಗಳಲ್ಲಿ ರಚಿಸಿದ. ಮೊದಲೆರಡು ಸಂಪುಟಗಳು 1828ರಲ್ಲಿಯೂ ಮೂರು ಮತ್ತು ನಾಲ್ಕನೆಯ ಸಂಪುಟಗಳು 1830 ರಲ್ಲಿಯೂ ಪ್ರಕಟಗೊಂಡವು.

	ಲಲಿತಪ್ರಬಂಧಗಳ ರಚನೆಯಲ್ಲಿಯೂ ಇವನದು ಅಗ್ರಸ್ಥಾನ. ದ ರೌಂಡ್ ಟೇಬಲ್(1817), ಟೇಬಲ್ ಟಾಕ್(1821-22), ದ ಪ್ಲೈನ್ ಸ್ಪೀಕರ್(1826) ಮತ್ತು ಇವನ ನಿಧನದ ಅನಂತರ ಪ್ರಕಟಗೊಂಡ ಎಂಟರ್ ಸ್ಲೊ(1856) ಮೊದಲಾದ ಸಂಗ್ರಹಗಳಲ್ಲಿ ಸೊಗಸಾದ ಲಲಿತ ಪ್ರಬಂಧಗಳಿವೆ. ಇವುಗಳಲ್ಲಿ ಸಮತೂಕ, ಮಿತಿಯರಿತ ಉತ್ಸಾಹ, ಜೀವನ ಸೌಂದರ್ಯ ಮತ್ತು ಸಂಪತ್ತುಗಳನ್ನೊಳಗೊಂಡ ಮನೋಧರ್ಮ ವನ್ನು ಗುರುತಿಸಬಹುದು.

	ಈತನ ವಿಮರ್ಶೆಯ ವಿಧಾನ ಕಾವ್ಯವಿಮರ್ಶೆಯ ಯಾವ ಸೂತ್ರಗಳಿಗೂ ಒಳಪಡದ ಸ್ವತಂತ್ರ ರೀತಿಯದು. ಆಯಾ ಕಾಲದ ಕೃತಿಗಳನ್ನು ವಿಮರ್ಶಿಸುವಾಗ ಆಯಾ ಯುಗಧರ್ಮನ್ನು ಅರಿತು ಜೀವನದ ವೈವಿಧ್ಯವನ್ನು ತನ್ಮಯತೆಯಿಂದ ಗ್ರಹಿಸುವ ಸಾಮಥ್ರ್ಯ, ಸಾರೋಕ್ತಿಯ ಪರಿಣಾಮಕಾರಿ ಪ್ರಯೋಗ ಇವನ ವೈಶಿಷ್ಟ್ಯ. ಈತನದು ಹೆಚ್ಚಾಗಿ ವರ್ಣನಾತ್ಮಕ ವಿಮರ್ಶೆ. ಪ್ರಸಿದ್ಧ ವಿಮರ್ಶಕ ಸೇಂಟ್ ಬೊ ಪ್ರತಿಪಾದಿಸಿದ ಸಮಷ್ಟಿ ಪರಿಣಾಮ ಪದ್ಧತಿಯ ವಿಮರ್ಶೆಗೆ (ಇಂಪ್ರೆಷನಿಸ್ಟಿಕ್ ಕ್ರಿಟಿಸಿಸಂ) ಇವನು ಅತ್ಯುತ್ತಮ ಉದಾಹರಣೆಯಾಗಿದ್ದಾನೆ.						
		(ಎಲ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ